ಸು. 1723. ಪ್ರಾಚೀನ ಕನ್ನಡ ಕವಿ. ಭಾರತ, ರುಕ್ಮಾಂಗದ ಚರಿತ್ರೆ ಎಂಬ ಕಾವ್ಯಗಳ ಕರ್ತೃ. ಕಂದರೂಪದಲ್ಲಿ ಒಂದು ನೀತಿ ಗ್ರಂಥವನ್ನು ಈತ ರಚಿಸಿರುವಂತೆ ತಿಳಿದುಬರುತ್ತದೆ. ಈತ ಮತದಲ್ಲಿ ಶ್ರೀವೈಷ್ಣವ ಕಾಶ್ಯಪ ಗೋತ್ರದವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ಲಿಗೆ ಸಮೀಪದಲ್ಲಿರುವ ಹಾರುಗದ್ದೆ (ಖಗಪುರ) ಈತನ ಜನ್ಮಸ್ಥಳ. ತಂದೆ ರಾಮಚಂದ್ರ, ಗುರು ದೇಶಿಕೋತ್ತಮ. ಲಕ್ಷ್ಮಿಯ ಅನುಗ್ರಹದಿಂದ ಹುಟ್ಟಿದುದರಿಂದ ಲಕ್ಷ್ಮ ಎಂಬ ಹೆಸರು ಬಂತೆಂದು ಕವಿಯೇ ಹೇಳಿ ಕೊಂಡಿದ್ದಾನೆ. ತನ್ನೂರಿನ ದೇವರಾದ ಚೆನ್ನಿಗರಾಯನ ಅಂಕಿತದಲ್ಲಿ ಈತ ಕೃತಿಗಳನ್ನು ರಚಿಸಿದ್ದಾನೆ. ಪೂರ್ವಕವಿಗಳಲ್ಲಿ ಬಾಣ, ವರರುಚಿ, ವಾಲ್ಮೀಕಿ, ವ್ಯಾಸ, ದಂಡಿ, ಭವಭೂತಿ, ಕಾಳಿದಾಸ, ಕುಮಾರವ್ಯಾಸ ಮುಂತಾದವರನ್ನು ಸ್ಮರಿಸಿದ್ದಾನೆ. ಪೂರ್ವಕವಿಗಳಲ್ಲಿ ಕುಮಾರವ್ಯಾಸನನ್ನು ಅನುಸರಿಸಿರುವುದಾಗಿ ಹೇಳಿಕೊಂಡಿದ್ದಾನೆ. ‘ಬರೆದ ಮೇಲೆ ತೊಡೆವ ಕವಿಯಲ್ಲ ಪದಗಳನ್ನಿಟ್ಟು ಮರಳಿ ಯೋಜಿಪ ಕವಿಯಲ್ಲ’ ಎಂಬುದಾಗಿ ತನ್ನ ಸಾಮಥ್ರ್ಯವನ್ನು ಬಣ್ಣಿಸಿಕೊಂಡಿದ್ದಾನೆ. ಈತನಿಗೆ ಪುಂಭಾವ ಭಾರತಿ ಅಥವಾ ಗಂಡುಶಾರದೆ, ಕನ್ನಡ ಕವೀಂದ್ರಾಭರಣ ಎಂಬ ಬಿರುದುಗಳಿದ್ದಂತೆ ತಿಳಿಯುತ್ತದೆ.

ಈತ ಭಾರತವನ್ನು ವಾರ್ಧಕ ಷಟ್ಪದಿಯಲ್ಲಿ ರಚಿಸಿದ್ದಾನೆ. ಇದರಲ್ಲಿ ಸು.99 ಸಂಧಿಗಳು 4000ಕ್ಕೂ ಮಿಕ್ಕು ಪದ್ಯಗಳೂ ಇವೆ. ಈತನ ದೃಷ್ಟಿಯಲ್ಲಿ ಭಾರತದ ಕಥೆ ಹೀಗಿದೆ : ಸಕಲ ವೇದಶಾಸ್ತ್ರ ಪುಣ್ಯನದಿಗಳ ವಾರಾಸಿ ಭಾರತ-ಅದನ್ನು ಬ್ರಹ್ಮ ವ್ಯಾಸನೆಂಬ ಮಂದರದಿಂದ ಕಡೆದ. ಆಗ ದ್ರೌಪದಿ, ಲಕ್ಷ್ಮಿ, ಭೀಷ್ಮ, ಕಲ್ಪವೃಕ್ಷ, ಧರ್ಮ, ಚಂದ್ರ, ಐರಾವತ, ಅರ್ಜುನ, ಕೃಷ್ಣ, ಅಮೃತ, ಕೌರವ, ಹಾಲಾಹಲ, ವಿದುರ, ಕಾಮಧೇನು, ದ್ರೋಣ, ಚಿಂತಾರತ್ನ ಹುಟ್ಟಿದವು. ಇಂಥ ಒಂದು ಬೃಹತ್ ಕಲ್ಪನೆಯ ಹಿನ್ನೆಲೆಯಿಂದ ಪ್ರಚೋದಿತವಾಗಿರುವ ಈ ಕೃತಿ ಗಾತ್ರದಲ್ಲೂ ದೊಡ್ಡದಾಗಿಯೇ ಇದೆ. 

ರುಕ್ಮಾಂಗದ ಚರಿತ್ರೆಯಲ್ಲಿ ಸು. 950 ಪದ್ಯಗಳು, 17 ಸಂಧಿಗಳು ಇವೆ. ನಾರದೀಯ ಪುರಾಣದಲ್ಲಿ ವಸಿಷ್ಠ ಮಾಂಧಾತನಿಗೆ ಹೇಳಿದ ಏಕಾದಶಿ ಮಹಿಮೆಯ ವರ್ಣನೆ ಈ ಕಾವ್ಯದ ವಸ್ತು. ಈ ಕಾವ್ಯದಲ್ಲಿ ಲಕ್ಷ್ಮ ಕವಿಯ ಉಪಮೆಗಳ ಮೋಹ ಮತ್ತು ಶಬ್ದಸಂಪತ್ತನ್ನು ಗುರುತಿಸಬಹುದು.

ಈತನ ನೀತಿಕಂದದಲ್ಲಿ ಸು. 250 ಪದ್ಯಗಳಿವೆ. ಲೋಕನೀತಿಯೇ ಮುಖ್ಯವಸ್ತುವಾಗಿರುವ ಈ ಪದ್ಯಗಳ ರಚನೆ ಸರಳವೂ ಸುಂದರವೂ ಆಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ